ಜಲಂಧರ್ - 
ಪಂಜಾಬ್ ರಾಜ್ಯದ ಒಂದು ನಗರ; ಜಿಲ್ಲೆ ; ಆಡಳಿತ ವಿಭಾಗ. ಜಲಂಧರ್ ಪಟ್ಟಣ ಉ. ಅ. 30ಔ 20' ಮತ್ತು ಪೂ. ರೇ. 75ಔ 35' ಮೇಲೆ ದೆಹಲಿಗೆ ಉತ್ತರ-ವಾಯುವ್ಯಕ್ಕೆ ರೈಲುಮಾರ್ಗದಲ್ಲಿ 229 ಮೈ. ದೂರದಲ್ಲೂ ಚಂಡೀಗಢದ ವಾಯುವ್ಯಕ್ಕೆ ರಸ್ತೆಯಲ್ಲಿ 93 ಮೈ. ದೂರದಲ್ಲೂ ಇದೆ. ಜಲಂಧರ್ ನಗರದ ಜನಸಂಖ್ಯೆ 2,96,106 (1971). ಜಲಂಧರ್ ದಂಡಿನ ಪ್ರದೇಶದ ಜನಂಸಖ್ಯೆ 33,724, ಜಲಂಧರ್ ನಗರದ ಸುತ್ತಲೂ ಬಸ್ತಿಗಳೆಂಬ ಅನೇಕ ಉಪನಗರಗಳುಂಟು. ಜಲಂಧರ್ ದಂಡಿನ ಪ್ರದೇಶ ಇರುವುದು ನಗರದ ದಕ್ಷಿಣಕ್ಕೆ ಮೂರು ಮೈ. ದೂರದಲ್ಲಿ. ಪಂಜಾಬ್ ವಿಶ್ವವಿದ್ಯಾಲಯಕ್ಕೆ ಸೇರಿದ ಹಲವು ಕಾಲೇಜುಗಳೂ ಪಂಜಾಬ್ ಸರ್ಕಾರದ ಅನೇಕ ಕಚೇರಿಗಳೂ ಇಲ್ಲುಂಟು. ಇದು ಜಿಲ್ಲೆಯ ಮತ್ತು ವಿಭಾಗದ ಆಡಳಿತ ಕೇಂದ್ರ, ಕ್ರೀಡಾ ಉಪಕರಣಗಳ ತಯಾರಿಕೆ ಇಲ್ಲಿಯ ಒಂದು ಮುಖ್ಯ ಕೈಗಾರಿಕೆ. ಇದೊಂದು ರೈಲ್ವೆ ಸಂಧಿ ಸ್ಥಳ. ಹಲವು ರಸ್ತೆಗಳೂ ಇಲ್ಲಿ ಕೂಡುತ್ತವೆ. ನಗರದ ಪೂರ್ವಕ್ಕೆ ಒಂಬತ್ತು ಮೈ. ದೂರದಲ್ಲಿ ವಿಮಾನ ನಿಲ್ದಾಣವುಂಟು.

ಜಲಂಧರ ಎಂಬ ದೈತ್ಯ ಇಲ್ಲಿ ವಾಸವಾಗಿದ್ದನೆಂದೂ ಈ ರಾಕ್ಷಸನ ಉಪಟಳ ಅತಿಯಾದಾಗ ಶ್ರೀವಿಷ್ಣು ಈತನನ್ನು ಕೊಂದನೆಂದೂ ಪದ್ಮಪುರಾಣದಲ್ಲಿ ಹೇಳಿದೆ. 7ನೆಯ ಶತಮಾನದ ಪೂರ್ವಾರ್ಧದಲ್ಲಿ ಇಲ್ಲಿಗೆ ಭೇಟಿ ಕೊಟ್ಟ ಚೀನೀ ಯಾತ್ರಿಕ ಹ್ಯೂಯೆನ್‍ತ್ಸಾಂಗ್‍ನ ಯಾತ್ರಾವೃತ್ತದಲ್ಲಿ ಜಲಂಧರ ಉಲ್ಲೇಖವಿದೆ. ಈ ಸುಂದರ ನಗರದ ಸುತ್ತಳತೆ 2 ಮೈ. ಇತ್ತೆಂದೂ ಇಲ್ಲಿ ನಗರಧನ್ ಎಂಬ ಪ್ರಸಿದ್ಧ ಬೌದ್ಧ ವಿಹಾರವಿತ್ತೆಂದೂ ತಾನು ಅಲ್ಲಿ ಚಂದ್ರವರ್ಮನೆಂಬ ವಿದ್ವಾಂಸನ ಕೈಕೆಳಗೆ ಬೌದ್ಧ ಗ್ರಂಥಗಳನ್ನು ಅಧ್ಯಯನ ಮಾಡಿದುದಾಗಿಯೂ ಅವನು ಹೇಳಿದ್ದಾನೆ. ಯೋಗಿನೀ ತಂತ್ರದಲ್ಲಿ ಜಲಂಧರ-ದೋಅಬ್ ಪ್ರದೇಶವನ್ನು ತ್ರಿಗರ್ತ ಎಂದು ಹೇಳಲಾಗಿದೆ. ಇಲ್ಲಿ ವಿಶ್ವಮುಖಿ ದೇವಿಯ ಒಂದು ದೇವಾಲಯವುಂಟು. ಐವತ್ತೊಂದು ಶಕ್ತಿ ಪೀಠಗಳಲ್ಲಿ ಇದು ಒಂದು.

ಜಲಂಧರ್ ರಜಪೂತ ದೊರೆಗಳ ರಾಜಧಾನಿಯಾಗಿತ್ತು. 1088ರಲ್ಲಿ ಇದು ಘೋರಿ ಇಬ್ರಾಹಿಮ್ ಷಹನ ವಶವಾಯಿತು. ಮೊಘಲ್ ಅರಸರ ಆಳ್ವಿಕೆಯಲ್ಲಿ ಈ ಪಟ್ಟಣ ಒಬ್ಬ ಸರದಾರನ ಆಡಳಿತ ಕೇಂದ್ರವಾಗಿತ್ತು. 1757ರಲ್ಲಿ ಸಿಕ್ಕರು ಈ ನಗರವನ್ನು ಸುಟ್ಟರು. ಅನಂತರ ಇದು ಫೈಜುಲ್ಲಾ ಪುರಿಯ ಸಂಘದ ಖುಶಾಲಸಿಂಗನ ವಶಕ್ಕೆ ಬಂದು 1766ರಲ್ಲಿ ಹೊಸ ರೂಪ ಪಡೆಯಿತು. ಆತನ ಮಗ ಬುದ್ಧಸಿಂಗ್ ಈ ಪಟ್ಟಣವನ್ನು ವಶಪಡಿಸಿಕೊಂಡ. ಮುಂದೆ ಬ್ರಿಟಿಷರ ಕಾಲದಲ್ಲಿ ಇದು ಜಲಂಧರ್ ಆಡಳಿತ ವಿಭಾಗದ ಮುಖ್ಯ ಕೇಂದ್ರವಾಯಿತು. 1846ರಲ್ಲಿ ಇಲ್ಲಿಂದ ಮೂರು ಮೈಲಿಗಳ ದೂರದಲ್ಲಿ ಸೇನಾ ಕೇಂದ್ರವೊಂದು ಸ್ಥಾಪಿತವಾಯಿತು.

ಜಲಂಧರ್ ಜಿಲ್ಲೆ ಉ. ಅ. 30ಔ 56'-30ಔ 37' ಮತ್ತು ಪೂ. ರೇ, 75ಔ 5'-76ಔ 16' ಮಧ್ಯೆ ಇದೆ. ಜಿಲ್ಲೆಯ ವಿಸ್ತೀರ್ಣ 3,399 ಚ. ಕಿಮೀ. ಜನಸಂಖ್ಯೆ 14,54,501 (1971). ಬಿಯಾಸ್ ಮತ್ತು ಸತಲಜ್ ನದಿಗಳ ನಡುವೆ ಇರುವ ಈ ಜಿಲ್ಲೆ ತ್ರಿಕೋನಾಕಾರವಾಗಿ ವಿಸ್ತರಿಸಿದೆ. ಫಲವತ್ತಾದ ರೇವೆ ಮಣ್ಣಿನ ಈ ಸೀಮೆಯನ್ನು ಪಂಜಾಬಿನ ಉದ್ಯಾನವೆಂದು ಸಿಖ್ಖರು ಕರೆಯುತ್ತಿದ್ದರು. ಇದು ಮಟ್ಟಸವಾದ ಫಲವತ್ತಾದ ಪ್ರದೇಶ. ಜೂನ್ ಮತ್ತು ಜುಲೈ ಅತಿ ಉಷ್ಣತೆಯ ತಿಂಗಳುಗಳು. ಜನವರಿ-ಫೆಬ್ರವರಿ ತಿಂಗಳುಗಳಲ್ಲಿ ಚಳಿ ಹೆಚ್ಚು ; ಮಂಜು ಬೀಳುತ್ತದೆ. ವಾರ್ಷಿಕ ಸರಾಸರಿ ಮಳೆ 25.02". ಜಿಲ್ಲೆಯ ಸೇ.80ರಷ್ಟು ನೆಲಸಾಗುವಳಿಯಾಗುತ್ತದೆ. ಇದರಲ್ಲಿ 56% ನೆಲಕ್ಕೆ ಬಿಸ್ಟ್ ಮತ್ತು ದೋಅಬ್ ವ್ಯವಸ್ಥೆಯಿಂದಲೂ ಬಾವಿಗಳಿಂದಲೂ ನೀರಾವರಿ ಸೌಲಭ್ಯ ಉಂಟು. ಮುಖ್ಯ ಬೆಳೆಗಳು ಗೋದಿ, ದ್ವಿದಳ ಧಾನ್ಯ, ಕಬ್ಬು, ರೇಷ್ಮೆ ಉತ್ಪಾದನೆ ಇಲ್ಲಿಯ ಒಂದು ಮುಖ್ಯ ಕಸುಬು.

ಜಲಂಧರ್ ಜಿಲ್ಲೆಯ ತಾಲ್ಲೂಕುಗಳು ಇವು (1971ರಲ್ಲಿದ್ದಂತೆ ಜನಸಂಖ್ಯೆಗಳನ್ನು ಆವರಣಗಳಲ್ಲಿ ಕೊಟ್ಟಿದೆ) : ನವಾ ಷಹರ್ (2,80,249), ಫಿಲೌರ್ (2,68,290) ನಕೋದಾರ್ (2,23,326), ಜಲಂಧರ್ (6,82,636). ಜಲಂಧರ್ ನಗರವಲ್ಲದೆ ಜಿಲ್ಲೆಯ ಮುಖ್ಯ ಪಟ್ಟಣಗಳು ಇವು : ನಕೋದಾರ್ (18,156), ನವಾ ಷಹರ್ (17,527), ಕರ್ತಾರ್‍ಪುರ್ (14,644). ಬಂಗಾ (11,885), ಫಿಲೌರ್ (11543).

ಜಲಂಧರ್ ವಿಭಾಗದಲ್ಲಿರುವ ಜಿಲ್ಲೆಗಳು ಇವು : ಜಲಂಧರ್ (ಜನಸಂಖ್ಯೆ 14,54,501 (1971) ಹೋಷಿಯಾರ್‍ಪುರ್ (10,52,153), ಕಪೂರ್ಥಲಾ (4,29,514), ಫಿರೋಜ್‍ಪುರ್ (19,05,833), ಲೂಧಿಯಾನ (14,19,421), ಅಮೃತಸರ್ (18,35,500) ಮತ್ತು ಗುರುದಾಸಪುರ್ (12,29,240).

ಸತಲಜ್ ಮತ್ತು ಬಿಯಾಸ್ ನದಿಗಳ ನಡುವೆ ಇರುವ ಪ್ರದೇಶಕ್ಕೆ ಜಲಂಧರ್ ದೊಅಬ್ ಎಂದು ಹೆಸರಿದೆ.
(ಬಿ.ಎ.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ